ಚಾರ್ವಾಕ ಸಿದ್ಧಾಂತ 
ನಾಸ್ತಿಕ ಸಿದ್ಧಾಂತಗಳಲ್ಲಿ ಮುಖ್ಯವಾದುದು. ಇದು ದರ್ಶನಗಳಲ್ಲೆಲ್ಲ ಮೊದಲನೆಯದು ಮತ್ತು ಸರ್ವ ದರ್ಶನಗಳಿಗೆ ಪ್ರತಿಕಕ್ಷಿಯಾದುದು. ಈ ಸಿದ್ಧಾಂತವನ್ನು ಪ್ರತಿಪಾದಿಸುವ ಗ್ರಂಥಗಳು ಲುಪ್ತವಾಗಿ ಹೋಗಿವೆಯಾದ ಕಾರಣ ಇದರ ವಿರೋಧಿಗಳು ಇದನ್ನು ಖಂಡಿಸುವಾಗ ಉದಾಹರಿಸುವ ಮಾತುಗಳಲ್ಲಿ ತೋರಿಸುವ ಉದ್ವೇಗ ಮತ್ತು ಕಾಳಜಿಗಳಿಂದಲೇ ಈ ದರ್ಶನದ ಮಹತ್ತ್ವ ಮತ್ತು ಜನಪ್ರಿಯತೆಯನ್ನು ತಿಳಿಯಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಅಲ್ಪಸ್ವಲ್ಪ ವಿಷಯಗಳು ಜಾಬಾಲಿ, ಪರಾಶರ ಮೊದಲಾದ ಉಪನಿಷದ್ ಋಷಿಗಳ ಮಾತುಗಳಲ್ಲಿಯೂ ರಾಮಾಯಣ, ವಿಷ್ಣುಪುರಾಣ, ಮಹಾಭಾರತಾದಿಗಳಲ್ಲಿಯೂ ಮಾಧವಾಚಾರ್ಯರ ಸರ್ವದರ್ಶನಸಂಗ್ರಹ ಮೊದಲಾದ ಇತ್ತೀಚಿನ ದರ್ಶನಗ್ರಂಥಗಳಲ್ಲಿಯೂ ಕಂಡುಬರುತ್ತವೆ. ಬೃಹಸ್ಪತ್ಯಾಚಾರ್ಯರೇ ಸೂತ್ರಕಾರರಾಗಿದ್ದ ಈ ತತ್ತ್ವದರ್ಶನ ಚಾರ್ವಾಕರೆಂಬುವರ ಭಾಷ್ಯದಿಂದ ಬುದ್ಧ ಪೂರ್ವಕಾಲದಲ್ಲಿಯೇ ಪ್ರಚಾರದಲ್ಲಿದ್ದಂತೆ ತಿಳಿದುಬರುತ್ತದೆ. ತತ್ತ್ವಸಂಗ್ರಹವೆಂಬ ಬೌದ್ಧಗ್ರಂಥದ ಮೂಲಕ ಕಂಬಲಾಶ್ವತರ ಎಂಬ ಚಾರ್ವಾಕ ಮತಾಚಾರ್ಯರನ್ನು ಖಂಡಿಸಿದುದು ಕಾಣುವುದಲ್ಲದೆ ಬೌದ್ಧಗ್ರಂಥಗಳಲ್ಲಿಯೇ ಇನ್ನೂ ಅನೇಕ ಚಾರ್ವಾಕ ಮತಪ್ರವರ್ತಕರ ಹೆಸರುಗಳು ಸಿಕ್ಕುತ್ತವೆ. ಶಬರ, ಪ್ರಭಾಕರ, ಪತಂಜಲಿ, ಭಾಸ್ಕರಾಚಾರ್ಯ ಮುಂತಾದವರ ಗ್ರಂಥಗಳಲ್ಲಿನ ಅಭಿಪ್ರಾಯಗಳನ್ನು ನೋಡಿದರೆ ಚಾರ್ವಾಕದರ್ಶನ ಪೂರ್ವಕಾಲದಲ್ಲಿ ಬಹಳ ಪ್ರಚಾರದಲ್ಲಿದ್ದಂತೆ ತೋರುತ್ತದೆ. ಸರ್ವದರ್ಶ ಸಂಗ್ರಹದ ಮೊದಲನೆಯ ಅಧ್ಯಾಯವೇ ಪ್ರಬಲವಾದ ಚಾರ್ವಾಕಮತದ ಖಂಡನೆಯಿಂದ ಪ್ರಾರಂಭವಾಗುತ್ತದೆ. ಚಾರ್ವಾಕ ಮತದ ಕೆಲವು ಪ್ರಕ್ರಿಯೆಗಳ ಪ್ರಭಾವವಾದರೂ ಇತರ ದಾರ್ಶನಿಕರ ಮೇಲೆ ಆದುದು ಸ್ಪಷ್ಟವಿದೆ. ಏಕೆಂದರೆ ಪ್ರಾಚೀನವಾದ 'ನಾಯಮಾತ್ಮಾ ಪ್ರವಚನೇನ ಲಭ್ಯಃ ನ ಮೇಧಯಾ, ನ ಚ ಬಹುದಾ ಶ್ರುತೇನ, ಅರ್ವಾಚೀನವಾದ 'ಸ್ವರ್ಗನರಕ ಬೇರಿಲ್ಲ ಕಾಣಿರೊ ಇತ್ಯಾದಿ ಅನೇಕ ಆಸ್ತಿಕರ ಮಾತುಗಳು ಯಜ್ಞ ಯಾಗಾದಿ ಆಚಾರಗಳ, ಸ್ವರ್ಗ ನರಕಾದಿ ಲೋಕಗಳ ಸಾಫಲ್ಯ ವೈಫಲ್ಯಗಳ ವಿಚಾರದಲ್ಲಿ ಅಂಶತಃ ಚಾರ್ವಾಕರ ವಾದಗಳನ್ನು ಸಮರ್ಥಿಸುತ್ತವೆ.

ಚಾರು + ವಾಕ್ = ಚಾರ್ವಾಕ ಎಂದರೆ ಮನಸ್ಸಿಗೆ ಹಿಡಿಸುವ ಮಾತು ಎಂದರ್ಥ. ಲೋಕಾಯತ, ಲೋಕಾಯತಕ, ಲೌಕಾಯ ಇತ್ಯಾದಿ ಹೆಸರುಗಳಿಂದ ಈ ಮತವನ್ನು ಕರೆಯಲಾಗಿದೆ. ದೇವರ ಅಸ್ತಿತ್ವವನ್ನು ಒಪ್ಪುವುದಿಲ್ಲವಾದ ಕಾರಣ ಇದು ನಾಸ್ತಿಕ ಮತ. ಉಳಿದೆಲ್ಲ ದರ್ಶನಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಆತ್ಮನೆಂಬ ವಸ್ತುವನ್ನು ಒಪ್ಪುವರಾದ ಕಾರಣ ಅವರೆಲ್ಲ ಆಸ್ತಿಕರು. ಚಾರ್ವಾಕರು ದೇಹಕ್ಕಿಂತಲೂ ಬೇರೆಯಾದ ಆತ್ಮನನ್ನೂ ಪಾಪಪುಣ್ಯಗಳನ್ನೂ ಪರಲೋಕಗಳನ್ನೂ ಒಪ್ಪುವುದಿಲ್ಲ. ಇವರದು ಶುದ್ಧ ಭೌತಿಕವಾದ. ಈ ಸಿದ್ಧಾಂತದಲ್ಲಿ ಪ್ರತ್ಯಕ್ಷದಿಂದ ತಿಳಿಯುವ ವಸ್ತುಗಳೇ ವಸ್ತುಗಳು. ಅವು ನಾಲ್ಕು. ಪೃಥಿವಿ, ನೀರು, ಅಗ್ನಿ, ಗಾಳಿ. ಇಂದ್ರಿಯಗಳಿಗೆ ಗೋಚರವಲ್ಲದ ವಸ್ತುಗಳನ್ನು ನಂಬಬೇಕಾಗಿಲ್ಲ. ಸುಖದುಃಖಗಳಿಗೆ ವಸ್ತುಸ್ವಭಾವವೇ ಕಾರಣ. ನಾಲ್ಕು ಭೂತಗಳ ಸಂಯೋಗವೇ ದೇಹರೂಪವಾಗಿ ಬರುತ್ತದೆ. ಈ ಸಂಯೋಗವಿಶೇಷದಲ್ಲಿಯೇ ಬುದ್ಧಿ, ಜ್ಞಾನ ಎಂಬ ಜೈತನ್ಯಶಕ್ತಿ ಹೊರಬೀಳುತ್ತದೆ. ಈ ಚೈತನ್ಯಶಕ್ತಿ ಭೌತ ಶಕ್ತಿಯೇ ಹೊರತು ಬೇರೆಯಲ್ಲ. ಆದಕಾರಣ ಶರೀರವಿರುವವರೆಗೆ ಆತ್ಮಶಕ್ತಿಯಿದ್ದು ಶರೀರದೊಂದಿಗೆ ಅದೂ ನಷ್ಟವಾಗುತ್ತದೆ.

ಮುಖ್ಯವಾಗಿ ಚಾರ್ವಾಕರಿಗೆ ಪ್ರತ್ಯಕ್ಷವೇ ಪ್ರಮಾಣ. ಅನುಮಾನಗಳಿಂದ ಸಿದ್ಧವಾಗುವ ಅನುಭವಗಳು ಕೇವಲ ಸಂದೇಹ ಮತ್ತು ಸಂಭಾವ್ಯತೆಯ ಮಟ್ಟಿಗೆ ತಲುಪಿಸುವ ಕಾರಣ ಖಚಿತಜ್ಞಾನಕ್ಕೆ ಅನುಮಾನ ಪ್ರಮಾಣವಾಗಲಾರದೆಂದು ಇವರ ಅಭಿಮತ. ವಸ್ತುಸ್ವಭಾವವೇ ಕಾರಣಶಕ್ತಿ. ಆದ್ದರಿಂದಲೇ ಪರಿಣಾಮ ಪ್ರತ್ಯಕ್ಷವಾಗುವುದಾದ ಕಾರಣ ಇವರು ಸ್ವಭಾವವಾದಿಗಳು. ಇದಕ್ಕೆ ಯಾದೃಚ್ಛಿಕವಾದವೆಂದೂ ಹೇಳುತ್ತಾರೆ. ಏಕೆಂದರೆ ಒಬ್ಬನ ಇಚ್ಛಾಶಕ್ತಿಯ ನಿಮಿತ್ತ ಕಾರಣದಿಂದ ಪರಿಣಾಮ ಪರಂಪರೆ ಉಂಟಾಗುವಂತೆ ಕಂಡು ಬರುವುದಿಲ್ಲ. ನಮ್ಮ ಬಯಕೆಯಿಲ್ಲದೆ ನಮಗೆ ತಿಳಿಯದೆಯೇ ಸುಖದುಃಖಗಳ ಅನುಭವ ಬರುವ ಕಾರಣ ಇದಕ್ಕೆ ಪ್ರಾಸಂಗಿಕವಾದವೆಂದೂ ಹೇಳುತ್ತಾರೆ.

ಚಾರ್ವಾಕರಲ್ಲಿ ಕೆಲವು ಪಂಗಡದವರು ನೇತಿವಾದಿಗಳು ಅಂದರೆ ನಿಹಿಲಿಸ್ಟ್ ಅಥವಾ ನೆಗೆಟಿವಿಸ್ಟು. ಪ್ರಪಂಚ ನಿತ್ಯವಲ್ಲ, ಸತ್ಯವಲ್ಲ ಎಂಬುದು ಇವರ ಮತ. ಭಾರತೀಯ ತತ್ತ್ವಜ್ಞಾನಗಳಲ್ಲಿ ಆಸ್ತಿಕರು, ನಾಸ್ತಿಕರು, ಅದ್ವಯವಾದಿಗಳು-ಹೀಗೆ ಮೂರು ವಿಧ ವಿಭಾಗಿಸಿರುವುದನ್ನು ನೋಡಿದರೆ ನಾಸ್ತಿಕರಿಗೆ ಇರುವ ಪ್ರಾಧಾನ್ಯ ತಿಳಿಯುತ್ತದೆ. ಈ ಆಸ್ತಿ, ನಾಸ್ತಿ ಮತಗಳಲ್ಲಿ ಯಾವುದು ಮೊದಲೆಂದು ಹೇಳುವುದು ಸುಲಭವಲ್ಲ. ಆಸ್ತಿಕ ಮತದಲ್ಲಿ ನಾಸ್ತಿಕ ಮತದ ಖಂಡನೆಯೂ ನಾಸ್ತಿಕ ಮತದಲ್ಲಿ ಆಸ್ತಿಕ ಮತದ ಖಂಡನೆಯೂ ಕಾಣುವುದರಿಂದ ಅನಾದಿಕಾಲದಿಂದ ಎರಡೂ ಬಗೆಯ ಅಭಿಪ್ರಾಯಗಳು ಇದ್ದುವೆಂದು ಕಾಣುತ್ತದೆ. ಪ್ರತ್ಯಕ್ಷವೊಂದೇ (ಇಂದ್ರಿಯ ಪ್ರತ್ಯಕ್ಷ) ಪ್ರಮಾಣ; ಅನುಮಾನವೆಂದರೆ ಸಂದೇಹ; ಆಗಮವೆಂಬುದು ಕೇಳಿದುದು, ನೋಡಿದುದಲ್ಲ ಎಂಬ ಚಾರ್ವಾಕವಾದವನ್ನು ಶಂಕರಾಚಾರ್ಯರೇ ಆದಿಯಾಗಿ ಎಲ್ಲ ಮತಾಚಾರ್ಯರೂ ಖಂಡಿಸುತ್ತಾರೆ. ಪ್ರತ್ಯಕ್ಷವೇ ಕೆಲವು ವೇಳೆ ಆಭಾಸವಾಗುವುದು, ಅನುಮಾನವಿಲ್ಲದೆ ವ್ಯವಹಾರವೇ ಸಾಗಲಾರದು-ಎಂದು ವೇದಾಂತಿಗಳ ವಾದ. ಸುಶಿಕ್ಷಿತ ಚಾರ್ವಾಕರೆಂಬ ಕೆಲವರು ಅನುಮಾನ ಆಗಮಗಳನ್ನು ಆಂಶಿಕವಾಗಿ ಒಪ್ಪುತ್ತಾರೆ. ಪ್ರತ್ಯಕ್ಷಕ್ಕೆ ಗೋಚರವಾಗತಕ್ಕ ವಿಷಯಗಳಲ್ಲಿ ಅನುಮಾನ (ಯುಕ್ತಿ) ಆಗಮಗಳಿಗೆ ಅವಕಾಶವುಂಟೆನ್ನುತ್ತಾರೆ. ತಾರ್ಕಿಕರು ಯುಕ್ತಿಯಿಂದಲೇ ಅತ್ಯಂತ ಪರೋಕ್ಷವನ್ನು ನಂಬಿದರೆ ವೈದಿಕರು ಶಾಸ್ತ್ರದಿಂದ ಅಂಥ ವಿಷಯಗಳನ್ನು ನಂಬುತ್ತಾರೆ. ಚಾರ್ವಾಕೇತರ ದರ್ಶನಗಳಲ್ಲಿಯೇ ಪರಸ್ಪರ ವೈಚಿತ್ರ್ಯಗಳಿರುವುದರಿಂದ ಚಾರ್ವಾಕರಲ್ಲಿ ಈ ವಿಚಾರಗಳಿರುವುದರಲ್ಲಿ ಆಶ್ಚರ್ಯವಿಲ್ಲ. ಚಾರ್ವಾಕಮತಕ್ಕೆ ತಾರ್ಕಿಕರು ಹೇಳಿರುವ ಕೊನೆಯ ಸಮಾಧಾನ ಕುತೂಹಲಕರವಾಗಿದೆ: ಜೀವಾತ್ಮ, ಪರಮಾತ್ಮರನ್ನೂ ಪುಣ್ಯಪಾಪಗಳನ್ನೂ ನಂಬಿರುವ ನಮಗೆ ಅವೆಲ್ಲ ಇಲ್ಲದಿದ್ದರೂ ಏನೂ ನಷ್ಟವಿಲ್ಲ. ಆದರೆ ಅವು ಒಂದು ವೇಳೆ ಇದ್ದುದಾದರೆ ಇಲ್ಲವೆಂದು ಸಾಧಿಸುವ ನಿಮ್ಮ ಗತಿ ಏನು? ಆದುದರಿಂದ ಸಂದೇಹ ಮಾರ್ಗವಾದರೂ ಆಸ್ತಿಕಮಾರ್ಗವೇ ಯುಕ್ತ.

	ಚಾರ್ವಾಕಮತದ ಗುಣಾಂಶವನ್ನು ಹೇಳುವುದಾದರೆ ಮೂಲತಃ ವಸ್ತುಸ್ವಭಾವದಿಂದ ಸುಖದುಃಖಾದಿಗಳುಂಟಾಗುವ ಕಾರಣ, ಮತ್ತೊಬ್ಬ ಪುರಷನ ಪ್ರಯತ್ನದಿಂದ ಬರುವುದಿಲ್ಲವಾದ ಕಾರಣ ಪರರಲ್ಲಿ ದ್ವೇಷವೆಂಬುದಕ್ಕೆ ಅವಕಾಶವಿಲ್ಲ. ಪರರಲ್ಲಿನ ರಾಗದ್ವೇಷಗಳನ್ನು ಅಡಗಿಸುವುದಕ್ಕಿಂತ ಹೆಚ್ಚಿನ ದರ್ಶನೋದ್ದೇಶ ಯಾವುದು? ಬದುಕಿರುವವರೆಗೆ ಚೆನ್ನಾಗಿ ಬದುಕು, ಚೆನ್ನಾಗಿ ಬದುಕುವಂತೆ ಪರಿಸರ ನಿರ್ಮಿಸಿಕೊಂಡು ಬದುಕು ಎನ್ನುವ ತತ್ತ್ವಜ್ಞಾನ ಯಾರಿಗೆ ಬೇಕಿಲ್ಲ? ಇದರಲ್ಲಿ ನಿಷಿದ್ಧವಾದುದೇನಿದೆ? ಇವು ಚಾರ್ವಾಕ ಮತ ನಮ್ಮೆದುರಿಗಿಟ್ಟ ಪ್ರಶ್ನೆಗಳು. ಧರ್ಮ ಅಥವಾ ಸಮಾಜವ್ಯವಸ್ಥೆಗೆ ವಿರೋಧವಾಗದ ಕಾಮನೆಗಳು ಗ್ರಾಹ್ಯವೆಂಬ ಮಾತು ಭಗವದ್ಗೀತೆಯಲ್ಲಿಯೂ ಕಾಣುತ್ತದೆ. ಮಹಾಭಾರತ ಯುದ್ಧವಾದ ಮೇಲೆ ಧರ್ಮರಾಜ ಪಟ್ಟಾಭಿಷಿಕ್ತನಾದ ಅನಂತರ ಒಂದು ದಿನ ಚಾರ್ವಾಕನೆಂಬಾತ (ಈತನೊಬ್ಬ ರಾಕ್ಷಸನೆನ್ನಲಾಗಿದೆ) ತುಂಬಿದ ರಾಜಸಭೆಗೆ ಬಂದು ರಾಜನನ್ನು ದೂಷಿಸುವ ಒಂದು ಕಥೆ ಇದೆ. ಕೇವಲ ರಾಗಾಂಧನಾಗಿ, ರಾಜ್ಯಭೋಗದ ಲಾಲಸೆಯಿಂದ, ಸ್ತ್ರೀ ಬಾಲಶೇಷವಾಗಿ ಲಕ್ಷಾನುಗಟ್ಟಲೆ ಜನರ ನಾಶಮಾಡಿ, ಸತ್ತವರಿಗೆ ಸ್ವರ್ಗ ಬರುವುದೆಂದು ಸಾಯುವುದಕ್ಕೆ ಪ್ರೋತ್ಸಾಹಿಸಿದ ಮಹಾಪಾಷಿಷ್ಠನೆಂದು ಧರ್ಮರಾಜನನ್ನು ಆ ಚಾರ್ವಾಕ ದೂಷಿಸುತ್ತಾನೆ. ಅನಂತರ ಅಲ್ಲಿದ್ದ ಬ್ರಾಹ್ಮಣರು ಈ ರಾಕ್ಷಸನನ್ನು ಶಾಪದಿಂದ ಕೊಂದುಬಿಡುತ್ತಾರೆ. ಇದು ಭಾರತದಲ್ಲಿ ಬರುವ ಕಥೆ. ಇದರಿಂದ ಎರಡು ಅಂಶಗಳ ಮೇಲೆ ಬೆಳಕು ಬೀಳುತ್ತದೆ. ಪ್ರಪಂಚವನ್ನು ಸುಖವಾಗಿಟ್ಟುಕೊಂಡು ತಾವೂ ಸುಖವಾಗಿರಬೇಕು. ಕೇವಲ ತಮ್ಮ ಸುಖಕ್ಕೋಸ್ಕರವೇ ಪ್ರಪಂಚವನ್ನು ಹಿಂಸಿಸಬಾರದು ಎಂಬ ಪ್ರಪಂಚಾನುಗ್ರಹ ದೃಷ್ಟಿಯೇ ಚಾರ್ವಾಕಮತದ ಮುಖ್ಯ ಧೈೀಯವಾಗಿತ್ತೆಂಬುದೊಂದು. ಇನ್ನೊಂದು, ಮತೀಯ ಸಹಿಷ್ಣುತೆಗೆ, ವೈಚಾರಿಕ ಸ್ವಾತಂತ್ರ್ಯಕ್ಕೆ ಹೆಸರಾಗಿದ್ದ ಭಾರತೀಯ ಪರಂಪರೆಯಲ್ಲಿಯೂ ವಿರೋಧಾಭಿಪ್ರಾಯಕ್ಕೆ ಅಸಹನೆ, ಅವುಗಳ ದಮನ, ನಾಶಗಳಂಥ ಅವೈಚಾರಿಕ ಕ್ರಮಕ್ಕೆ ಕ್ವಚಿತ್ತಾಗಿಯಾದರೂ ಅವಕಾಶವಿತ್ತೆಂಬುದಕ್ಕೆ ನಷ್ಟ ಚಾರ್ವಾಕ ದರ್ಶನದಂಥ ಕೆಲವು ನಿದರ್ಶನಗಳಿದ್ದುವೆಂಬುದು.  			(ಜೆ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ